ನರಸಿಂಹಾಚಾರ್ಯ, ಪು ತಿ
	1905- ಕನ್ನಡದ ನವೋದಯ ಕಾಲದ ಪ್ರಮುಖ ಕವಿಗಳಲ್ಲಿ ಒಬ್ಬರು. ಪುರೋಹಿತ ತಿರುನಾರಾಯಣೈಯ್ಯಂಗಾರ್ಯ ನರಸಿಂಹಾಚಾರ್ಯ ಎಂಬುದು ಇವರ ಪೂರ್ತ ಹೆಸರು. ಪು.ತಿ.ನ. ಇವರ ಕಾವ್ಯನಾಮ. ಹುಟ್ಟಿದ್ದು ಮೇಲುಕೋಟೆಯಲ್ಲಿ 17-3-1905ರಂದು ಚಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವದದಿನ. ಯದುಗಿರಿಯ ಪ್ರಕೃತಿ ರಮಣೀಯತೆ, ಚಲುವ ನಾರಾಯಣಸ್ವಾಮಿಯ ದೇಗುಲದ ಸುತ್ತಲೂ ಜರುಗುತ್ತಿದ್ದ ಉತ್ಸವ ಸಂಭ್ರಮಗಳು ಆಗಾಗ ನಡೆಯುತ್ತಿದ್ದ ಸಂಗೀತ ನಾಟಕಾದಿಗಳ ವೈಭವ ಹಾಗೂ ಯಾವ ಕಾಲಕ್ಕೂ ಏರ್ಪಟ್ಟಿದ್ದ ಸಂಸ್ಕøತ ಶಾಸ್ತ್ರ ವ್ಯಾಸಂಗ, ಆಸ್ತಿಕ ವಾತಾವರಣ-ಇವೆಲ್ಲ ಬೆಳೆಯುತ್ತಿದ್ದ ಇವರ ಮನಸ್ಸನ್ನು ಸಂಸ್ಕರಿಸಿದ ಶಕ್ತಿಗಳು. ತಮ್ಮ ಹದಿಮೂರನೆಯ ವರ್ಷದವರೆಗೂ ಮೇಲುಕೋಟೆಯಲ್ಲಿ ಮಾಧ್ಯಮಿಕ ಶಾಲಾ ವ್ಯಾಸಂಗದೊಂದಿಗೆ ವೇದ ಹಾಗೂ ಸಂಸ್ಕøತಗಳನ್ನು ಕಲಿತರು. ಮುಂದೆ ಮೈಸೂರಿನ ಮಹಾರಾಜ ಕೋಲೇಜಿಯೇಟ್ ಹೈಸ್ಕೂಲಿನಲ್ಲಿ ಮತ್ತು ಮಹಾರಾಜ ಕಾಲೇಜುಗಳಲ್ಲಿ ವ್ಯಾಸಂಗವನ್ನು ಮುಂದುವರಿಸಿದರು. ಬಿ.ಎ. ತರಗತಿಯಲ್ಲಿ ಮುಖ್ಯ ವಿಷಯ ಸಂಸ್ಕøತ ದರ್ಶನದೊಂದಿಗೆ ಇಂಗ್ಲಿಷ್ ಹಾಗೂ ಫ್ರೆಂಚ್ ಭಾಷಾಸಾಹಿತ್ಯಗಳ ಅಧ್ಯಯನ ಮಾಡಿದರು.

	ಉದ್ಯೋಗರಂಗದಲ್ಲಿ ಇವರ ಪ್ರಥಮ ಸೇವೆ ಇನ್ಸ್‍ಪೆಕ್ಟರ್ ಆಫ್ ಆಫೀಸ್ ಸಿಸ್ಟಮ್ಸ್ ಅಂಡ್ ಕೌ ಪ್ರೊಟೆಕ್ಷನ್ ಆಗಿ (1926). ಒಂದು ವರ್ಷದ ಅನಂತರ ಮೈಸೂರ್ ಸ್ಟೇಟ್ ಟ್ರೂಪ್ಸ್‍ನಲ್ಲಿ ಚೀಫ್ ಕಮಾಂಡೆಂಟರ ಆಫೀಸಿನಲ್ಲೂ ಮತ್ತು ಸೂಪರಿಂಟೆಂಡೆಂಟ್ ಆಫ್ ಮಿಲಿಟರಿ ಸ್ಟೋರ್ಸ್ ಆಗಿಯೂ 1952ರವರೆಗೆ ದುಡಿದರು. ಇವರ ಅನೇಕ ಪ್ರಮುಖ ಕೃತಿಗಳು ರಚಿತವಾದದ್ದು ಈ ಅವಧಿಯಲ್ಲಿಯೇ. 1952-61ರವರೆವಿಗೂ ಮೈಸೂರು ಶಾಸನ ಸಭೆಯಲ್ಲಿ ಸಂಪಾದಕರ ಹುದ್ದೆ. ಮುಂದೆ 63ರಿಂದ 66ರವರೆಗೆ ಕನ್ನಡ ವಿಶ್ವಕೋಶ ಕಚೇರಿಯಲ್ಲಿ ಹಾಗೂ 66ರಿಂದ 71ರವರೆಗೆ ಇಂಗ್ಲಿಷ್-ಕನ್ನಡ ನಿಘಂಟು ಕಚೇರಿಯಲ್ಲಿ ಸೇವೆಸಲ್ಲಿಸಿ ಈಗ ವಿಶ್ರಾಂತರಾಗಿದ್ದಾರೆ.

	ಭಾವಗೀತೆ, ಗೀತನಾಟಕ, ಸಂಗೀತರೂಪಕ, ಭಾವನಾಚಿತ್ರ, ರಸಚಿತ್ರ, ಪ್ರಬಂಧ, ವಿಚಾರ ಸಾಹಿತ್ಯ, ಸಣ್ಣಕತೆ, ಗದ್ಯನಾಟಕ-ಹೀಗೆ ಅನೇಕ ಪ್ರಕಾರಗಳಲ್ಲಿ ಇವರ ಪ್ರತಿಭೆ ಮೆರೆದಿದೆ.

	ಗೀತನಾಟಕಗಳು ಇವರ ಪ್ರಾತಿನಿಧಿಕ ಪ್ರಕಾರ; ಇವರ ಕಾವ್ಯಶಕ್ತಿ ತನ್ನ ಪೂರ್ಣ ಅಭಿವ್ಯಕ್ತಿ ಕಂಡುಕೊಂಡಿರುವ ಮಾದ್ಯಮ, ಗದ್ಯದಲ್ಲಿ ವಿವರವಾಗಿ ಬರುವ ಭಾವ ಪದ್ಯಗಳಲ್ಲಿ ಸಾಂದ್ರವಾಗುತ್ತದೆ. ಪದ್ಯದ ನುಡಿಯಲ್ಲಿ ಸಾಂದ್ರವಾದ ಭಾವಕ್ಕೆ ಸ್ವರಭಾರ ಕೂಡಿದಾಗ ಅದಕ್ಕೆ ಒಂದು ಆಳ ದೊರೆಯುತ್ತದೆ. ಆದ್ದರಿಂದ ಇವರ ಸಾಹಿತ್ಯಕೃಷಿ ಗದ್ಯಕ್ಕಿಂತ ಪದ್ಯದಲ್ಲಿ ಒಲವು ತೋರಿ ಇತ್ತೀಚೆಗೆ ಸ್ವರ ಸಂಯೋಜನೆಯೆಡೆಗೆ ತಿರುಗಿದೆ.

	ಇವರ ಗೀತನಾಟಕಗಳನ್ನು ಸ್ಥೂಲವಾಗಿ ಸಾಹಿತ್ಯಪ್ರಮುಖವಾದವು, ಸಂಗೀತ ಪ್ರಮುಖವಾದವು ಎಂದು ವಿಂಗಡಿಸಬಹುದು. ಮೊದಮೊದಲಿನ ಗೀತನಾಟಕಗಳಾದ ಅಹಲ್ಯೆ, ಶಬರಿ, ವಿಕಟಕವಿವಿಜಯ ಹಾಗೂ ಇತ್ತೀಚಿನ ಸತ್ಯಾಯನ ಹರಿಶ್ಚಂದ್ರ ಇವು ಮೊದಲನೆಯ ವರ್ಗಕ್ಕೆ ಸೇರುತ್ತವೆ. ಹಂಸದಮಯಂತಿ ಮತ್ತು ಇತರ ರೂಪಕಗಳು, ರಾಮಪಟ್ಟಾಭಿಷೇಕ ಇವು ವಿಶೇಷವಾಗಿ ಸಂಗೀತ ಪ್ರಮುಖವಾದವು. ಗೋಕುಲ ನಿರ್ಗಮನ, ದೋಣಿಯ ಬಿನದ ಮತ್ತು ಕವಿ ಇವುಗಳಲ್ಲಿ ಸಾಹಿತ್ಯ ಹಾಗೂ ಸಂಗೀತದ ಸಮ್ಮೇಳವನ್ನು ಕಾಣುತ್ತೇವೆ.

	ಅಹಲ್ಯೆ, ಶಬರಿ ಮತ್ತು ಸತ್ಯಾಯನ ಹರಿಶ್ಚಂದ್ರ ಇವು ವಸ್ತುವಿನ ದೃಷ್ಟಿಯಿಂದ ಪುರಾಣ ವ್ಯಕ್ತಿಗಳನ್ನು ಕುರಿತ, ಬಹುಶಃ ಅವರ ಜೀವನದಲ್ಲಿ ಇವರು ಕಂಡುಕೊಂಡ ತತ್ತ್ವದ ಅಭಿವ್ಯಕ್ತಿ. ಅಹಲ್ಯೆ ಕನ್ನಡ ಗೀತನಾಟಕಪ್ರಪಂಚಲ್ಲೇ ಅನುಪಮವಾದುದು.

	ರಾಮಾಯಣ-ಮಹಾಭಾರತಗಳು ವಾಲ್ಮೀಕಿ ಮತ್ತು ವ್ಯಾಸರಿಂದ ರಚಿಸಲ್ಪಟ್ಟಿದ್ದರೂ ಅವು ಜನಸಾಮಾನ್ಯರಿಗೆ ತಲಪುವುದು ಹರಿಕಥೆ ನಾಟಕಗಳ ಮೂಲಕ ಅಥವಾ ಅವನ್ನು ಆಧರಿಸಿ ರಚಿತವಾದ ಇತರ ಕಾವ್ಯಗಳ ಶ್ರವಣದಿಂದ. ಇದರಿಂದಾಗಿ ರೂಢಿಗತವಾದ ರಾಮಾಯಣ-ಮಹಾಭಾರತಗಳು ಜನಮನದಲ್ಲಿ ಉಳಿದುಬಂದಿವೆ. ಮೂಲದ ಚಿರಂತನ ಕಾವ್ಯದ ನಡೆಯಲ್ಲಿ ಸಮತೂಕವನ್ನು ಕಾಯ್ದುಕೊಂಡಿರುವ ಪಾತ್ರಗಳು ಜನಸಾಮಾನ್ಯರಿಗೆ ತಲಪುವಷ್ಟರಲ್ಲಿ ಸಾಕಷ್ಟು ಓರೆಕೋರೆಯಾಗಿವೆ. ಇವುಗಳ ನಡೆಯಲ್ಲಿ ಅಸಹಜಕತೆ ಉಂಟಾಗಿದೆ. ಅಲ್ಲದೆ ಮೂಲಕ್ಕೂ ಇವುಗಳಿಗೂ ನಡುವೆ ವಿಸಂಗತಿಯನ್ನು ಕಾಣುತ್ತೇವೆ. ಹೀಗೆ ವಿಸಂಗತಿಯನ್ನು ತೋರುವ ಅಹಲ್ಯೆಯ ವೃತ್ತಾಂತ ಹಾಗೂ ಹರಿಶ್ಚಂದ್ರನ ವೃತ್ತಾಂತಗಳು ಅಹಲ್ಯೆ ಹಾಗೂ ಸತ್ಯಾಯನ ಹರಿಶ್ಚಂದ್ರ ನಾಟಕಗಳಲ್ಲಿ ಮೂಲಕ್ಕೆ ಎರವಾಗದಂತೆ, ರೂಢಿಗತ ಕಥೆಗಳಲ್ಲಿನ ಓರೆಕೋರೆಗಳಿಲ್ಲದಂತೆ, ಮಾನವ ಸಹಜ ನೆಲೆಯಲ್ಲಿ ನಡೆದು ಉದ್ದಿಷ್ಟ ಫಲವನ್ನು ಪಡೆಯುತ್ತವೆ.

	ಕನಸಿನಂತೆ ಚಿತ್ರಿಸಿರುವ ಸುರರ ಸ್ವರ್ಗಾಮೋದದಿಂದ ಅಹಲ್ಯೆಯ ವಿಭವಾಕಾಂಕ್ಷೆಯನ್ನು ತೋರುತ್ತ ಅಹಲ್ಯೆ ನಾಟಕ ಆರಂಭವಾಗುತ್ತದೆ. ಗೌತಮನ ತೀವ್ರ ತಪಸ್ಸು ಇಂದ್ರನಿಗೊಂದು ಸವಾಲನ್ನೆಸೆಯುತ್ತದೆ. ಅವನ ಸತ್ತ್ವಪರೀಕ್ಷೆಗಾಗಿ ಇಂದ್ರ ಮದನನ ಸಹಾಯವನ್ನು ಕೋರುತ್ತಾನೆ. ಮದನನ ಪ್ರವೇಶದಿಂದ ತೀವ್ರಗತಿಯನ್ನು ಪಡೆಯುವ ನಾಟಕದ ಕ್ರಿಯೆ ಗೌತಮನ ಸುಪ್ತಕಾಮ, ಅಹಲ್ಯೆಯ ವಿಭವಾಕಾಂಕ್ಷೆ ಹಾಗೂ ಇಂದ್ರನ ರೂಪಕಾಮ- ಈ ಮೂರೂ ದೌರ್ಬಲ್ಯಗಳು ಏಕಕಾಲದಲ್ಲಿ ಅವರನ್ನು ಕಾತರರನ್ನಾಗಿಸುವ ದುರ್ಘಟನೆಯಲ್ಲಿ ಅಂತ್ಯಗೊಳ್ಳುತ್ತದೆ. ಈ ದುರ್ಘಟನೆಯಲ್ಲಿ ತಮ್ಮ ತಮ್ಮ ಪಾಲನ್ನು ಅರಿತ ಮೂರೂ ಚೇತನಗಳೂ ಪಶ್ಚಾತ್ತಾಪ ಪಡುವ ಪ್ರತಿಕ್ರಿಯೆಯೂ ಚಿತ್ರಿತವಾಗಿದ್ದು, ಪೂತ ಚೇತನಗಳ ಮಿಲನದೊಂದಿಗೆ ನಾಟಕ ಮಂಗಳದಲ್ಲಿ ಮುಗಿಯುತ್ತದೆ. ಕಾಲೈಕ್ಯ ಕ್ರಿಯೈಕ್ಯ ಹಾಗೂ ಸ್ಥಳೈಕ್ಯಗಳನ್ನು ಅಂಕ ಅಂಕಗಳಲ್ಲಿ ಕಾಯ್ದುಕೊಂಡು ಹಂತಹಂತವಾಗಿ ಸಾಗುವ ಕ್ರಿಯೆಗೆ ಸೂಕ್ತ ವಾತಾವರಣದ ಹಿನ್ನೆಲೆ ಇದೆ. ಇಲ್ಲಿನ ಗೌತಮ ಮಹಾತಪಸ್ವಿಯೇನಲ್ಲ. ಪ್ರಕೃತಿ ಧರ್ಮದ ಅದಮ್ಯತೆಯನ್ನು ಮರೆತು, ಕಡೆಗೆ ಅದು ವಿಕೃತ ಸ್ಥಿತಿಯಲ್ಲಿ ಉದ್ಬೋಧಗೊಂಡಾಗ ಪಶ್ಚಾತ್ತಾಪ ಪಡುವಂಥವನು. ಇಂದ್ರ ಮಹಾಲಂಪಟನೇನಲ್ಲ. ವಶ್ಶೇಂದ್ರಿಯನಾದರೂ ಸನ್ನಿವೇಶ ವಶದಿಂದ ಸುಪ್ತ ರೂಪಲಾಲಸೆಗೆ ಬಲಿಯಾಗುತ್ತಾನೆ. ಹಾಗೆಯೇ ಅಹಲ್ಯೆಯೂ ಸನ್ನಿವೇಶ ವಶದಿಂದ ಹುಲುಬಯಕೆಗೆ ಬಲಿಯಾಗುತ್ತಾಳೆ. ನಾಟಕ ರಾಗಭೋಗದ ಸಮತೋಲವನ್ನು ಕಾಯ್ದುಕೊಂಡು, ಕಾಮ ಸಹಜವಾಗಿ ಪ್ರೇಮಕ್ಕೆ ಪಕ್ವವಾಗಬೇಕೆಂಬ ಸತ್ಯವನ್ನು ಸಾರುತ್ತದೆ.

	ಸತ್ಯಾಯನದಲ್ಲೂ ಹೀಗೆಯೆ. ಚಂಡಕೌಶಿಕ ಕೋಣನಂತೆ ಹೋರಾಡುವವನಲ್ಲ. ರಾಜರ್ಷಿ ಪದವಿಯನ್ನು ಸಾಧಿಸಿ ಅನೇಕ ಪುಣ್ಯಕಾರ್ಯಗಳನ್ನು ನಡೆಸಿದ ವಿಶ್ವಾಮಿತ್ರನಿಗೂ ಹರಿಶ್ಚಂದ್ರ ವೃತ್ತಾಂತದ ವಿಶ್ವಾಮಿತ್ರನಿಗೂ ಸಾಂಗತ್ಯವನ್ನು ತರುವ ಪ್ರಯತ್ನ ಈ ನಾಟಕದಲ್ಲಿದೆ. ಇದೇ ರೀತಿಯಲ್ಲಿ ರೋಹಿತಾಶ್ವನಿಗಾಗಿ ಸುಳ್ಳನ್ನಾಡಿದ ಹರಿಶ್ಚಂದ್ರನಿಗೂ ಎಲ್ಲ ಬವಣೆಗಳನ್ನು ಅನುಭವಿಸಿ ಸತ್ಯಕ್ಕೆ ಇನ್ನೊಂದು ಹೆಸರಾದ ಹರಿಶ್ಚಂದ್ರನಿಗೂ ಸುಸಂಗತಿಯನ್ನು ತರುವ ಪ್ರಯತ್ನವಿದೆ. ನಾಟಕ ಸಂಪೂರ್ಣವಾಗಿ ರುದ್ರಭೂಮಿಯಲ್ಲಿ ಜರುಗುವಂಥದು. ಕ್ರಿಯೆಯ ಉದ್ದೇಶ ಹರಿಶ್ಚಂದ್ರನ ಸತ್ತ್ವಪರೀಕ್ಷೆ. ವಿಶ್ವಾಮಿತ್ರ ಇವನ ಸತ್ತ್ವಪರೀಕ್ಷೆಗೆ ಹೊರಟವನು. ಈತ ಮೌಲ್ಯಾಭಿಕಾಂಕ್ಷಿ. ಈತನಲ್ಲಿ ಹರಿಶ್ಚಂದ್ರನ ಬಗ್ಗೆ ದ್ವೇಷದ ಹೊಲೆಯಿಲ್ಲ. ವಸಿಷ್ಠನೊಡನೆ ಹುರುಡಿಲ್ಲ. ಆದರೆ ಇಂದ್ರನ ಓಲಗದಲ್ಲಿ ಸ್ಥಾನವನ್ನು ಪಡೆಯಲು ತಕ್ಕ ಪರೀಕ್ಷೆಗೆ ಹರಿಶ್ಚಂದ್ರ ಒಳಗಾಗಲೇಬೇಕು. ಹರಿಶ್ಚಂದ್ರನ ಸತ್ತ್ವಪರೀಕ್ಷೆಗೆ ಒಡ್ಡಿರುವ ನಿಕಷಗಳೂ ನವೀನವಾಗಿವೆ. ಜಗತ್ತಿನ ಎರಡು ದ್ವಂದ್ವಗಳು ಶಿವ ಮತ್ತು ಅಶಿವ ಶಕ್ತಿಗಳು. ಎರಡೂ ಒಂದನ್ನೊಂದು ಹತ್ತಿಕ್ಕಲು ಪ್ರಯತ್ನಿಸುತ್ತಿರುತ್ತವೆ. ರೋಹಿತಾಶ್ವನ ಮರಣ ಅಶಿವ ಶಕ್ತಿಗಳಿಂದಾಗಿ ಸಂಭವಿಸಿ ಅವನ ಸಂಸ್ಕಾರದ ಪ್ರಶ್ನೆಯ ಹಿಂದೆ ಪುತ್ರವಾತ್ಸಲ್ಯದ ಪ್ರಲೋಭನೆಯನ್ನು ತಂದಿವೆ. ಶಿವಶಕ್ತಿಗಳೋ ಲೋಕಕಲ್ಯಾಣಕ್ಕಾಗಿ ರಾಜಸೂಯ ಯಾಗವನ್ನು ನಡೆಸಿದ ಕೈಯಿಂದ ಹೆಣದಕ್ಕಿಯನ್ನು ನೀಡು ಎಂದು ಬೇಡುತ್ತಿವೆ. ಪ್ರಲೋಭನೆ, ಅದು ಕೆಡುಕಿಗಾಗಿಯೇ ಇರಲಿ ಅಥವಾ ಒಳಿತಿಗಾಗಿಯೇ ಇರಲಿ, ಸತ್ಯಕ್ಕೆ ಅಪಚಾರವನ್ನು ತರುವಂಥದು. ಇವೆರಡನ್ನೂ ಮೀರಿ ನಿಂತು ಹರಿಶ್ಚಂದ್ರ ಸತ್ಯಾಯನನಾಗುತ್ತಾನೆ. ಸಂದಿಗ್ಧಕ್ಕೆ ಒಳಗಾದ ಹರಿಶ್ಚಂದ್ರನಿಗೆ ಸತ್ಯನಿಷ್ಠೆಯನ್ನು ಕಾಯಲು ಬೆಂಬಲ ನೀಡುವ ಚಂದ್ರಮತಿಯ ಪಾತ್ರ ನಮ್ಮ ಗಮನವನ್ನು ಸೆಳೆಯುತ್ತದೆ.
	ಶಬರಿ ನಾಟಕವೂ ಚಿಕ್ಕದು. ಅದರ ತತ್ತ್ವವೂ ಕಿರಿದು. ಬಾಳಿನ ಹಂಬಲವು ತೀರಿದ ಕೂಡಲೇ ಬಾಳು ಅರ್ಥಹೀನವಾಗುತ್ತದೆ. ಕೃತಕೃತ್ಯ ಚೇತನ ಮುಕ್ತಿಗೆ ಪ್ರಯತ್ನ ನಡೆಸುತ್ತದೆ ಎಂಬುದೇ ಇಲ್ಲಿನ ತಿರುಳು.

	ಗೋಕುಲನಿರ್ಗಮನ ಎಂಬುದು ಬೃಂದಾವನದ ಬಾಲಶ್ರೀಕೃಷ್ಣ ಮಧುರೆಯ ಒಡೆಯನಾಗಲು ಹೊರಟಾಗ ಅವನ ಗೋಕುಲ ವಾಸದ ಕೊನೆಯ ರಾತ್ರಿಯ ಚಿತ್ರಣ. ಬೆಳ್ದಿಂಗಳು, ಕೊಳಲಿನ ಸಮ್ಮೋಹಕ ಕರೆ, ರಾಸಲೀಲೆ ಈ ಎಲ್ಲವೂ ಸಂಗೀತ ಸಂಸ್ಕಾರ ಪಡೆದ ಗೀತಗಳಲ್ಲಿ ರಮ್ಯ ಚಿತ್ರಗಳನ್ನು ಸೃಜಿಸುತ್ತವೆ. ಕೃಷ್ಣನ ಜೀವನದ ಪ್ರಮುಖ ತಿರುವು, ರಮ್ಯಜೀವನಕ್ಕೆ ಅವನು ನುಡಿದ ವಿದಾಯ ಹಾಗೂ ವೇಣುವಿಸರ್ಜನ ಎಲ್ಲವೂ ಮೋಹಕ ರಾತ್ರಿಯ ರಾಸಕ್ರೀಡೆಗೆ ವಿಷಾದದ ಅಂತ್ಯವನ್ನು ತರುತ್ತವೆ.

	ದೋಣಿಯ ಬಿನದ ಮತ್ತು ಕವಿ ಎಂಬವು ಕನ್ನಡಕ್ಕೆ ಹೊಸ ಬಗೆಯ ಕೊಡುಗೆಗಳು. ಈ ಎರಡೂ ನಾಟಕಗಳಲ್ಲಿ ಗಮನ ಸೆಳೆಯುವ ಅಂಶಗಳೆಂದರೆ ಪ್ರಕೃತಿ ವಸ್ತುಗಳಿಗೆ ವ್ಯಕ್ತಿರೂಪ ನೀಡಿರುವುದು. ದೋಣಿಯ ಬಿನದಲ್ಲಿನ ಜಲಕನ್ನಿಕೆಯರ ಪಾತ್ರ ಸ್ವಾರಸ್ಯವಾದುದು. ತರುಣನನ್ನು ತೋಳ್ಬೀಸಿ ಆತ್ಮಹತ್ಯೆಗೆ ಕರೆಯುವವರೂ ಇವರೇ. ಅವನನ್ನು ಮುಳುಗಾಡಿಸಿ ಅಸು ಈಂಟಲೆಳಸುವವರೂ ಅವರೇ. ಕೊನೆಯಲ್ಲಿ ತಮ್ಮ ತೋಳಿನಲ್ಲಿರಿಸಿಕೊಂಡು ಅವನನ್ನು ದೋಣಿಯಲ್ಲಿ ತೇಲಿಸುವವರೂ ಅವರೇ. ಪ್ರಕೃತಿಯ ರುದ್ರ ಮತ್ತು ಲಲಿತ ಸ್ವರೂಪಗಳು ಒಂದೇ ಶಕ್ತಿಯ ವಿವಿಧ ರೂಪ ಎಂಬಂತೆ ತೋರಿರುವುದು ಇಲ್ಲಿನ ವಿಶೇಷ.

	`ಕವಿ ಎಂಬ ರೂಪಕದಲ್ಲಿ ಸೃಷ್ಟಿಯಲ್ಲಿ ವಿಕೀರ್ಣವಾದ ಶಿವದ ಗೀತವನ್ನು ಅನುವಾದಿಸುವ ಸೂಕ್ಷ್ಮಮತಿಯೊಬ್ಬನ ಚಿತ್ರವಿದೆ. ಅವನನ್ನು ಪ್ರಕೃತಿಯ ವಿವಿಧ ಸ್ವರೂಪಗಳು ಬಂದು ತಮ್ಮ ಸ್ವರೂಪವನ್ನು ವರ್ಣಿಸಿ ಪ್ರಶ್ನೆಗಳನ್ನು ಹಾಕುತ್ತವೆ. ಇಲ್ಲಿನವು ನುಡಿವ ಕವಿಯ ಮಾತುಗಳಲ್ಲ, ಪಡುವ ಕವಿಯ ಅನುಭವಗಳ ಅಭಿವ್ಯಕ್ತಿ.

	ಹಂಸದಮಯಂತಿ, ಹರಿಣಾಭಿಸರಣ ಮುಂತಾದವು ಸಂಗೀತವನ್ನು ಹೆಚ್ಚಾಗಿ ಅವಲಂಬಿಸಿರುವಂಥವು. ಆನಂದದ ಲಹರಿಯಲ್ಲಿದ್ದಾಗ ಕವಿಯ ಮನಸ್ಸು ಗುಣುಗುಣಿಸುತ್ತದೆ. ಆ ಗುಂಗಿನ ಆವೇಶಕ್ಕೆ ಮಾತಿನ ದೇಹ ನೀಡುವ ಪ್ರಯತ್ನ ಈ ಗೀತ ರೂಪಕಗಳು.

	ವಿಕಟಕವಿ ವಿಜಯ ಇನ್ನೊಂದು ವಿಶಿಷ್ಟ ಕೃತಿ, ವಸ್ತುವಿನ ದೃಷ್ಟಿಯಿಂದ ಮಹತ್ತ್ವಪೂರ್ಣವಾದುದು, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಬ್ರಿಟಿಷ್ ಕೃಪಾಪೋಷಿತವಾಗಿದ್ದ ದೇಶೀ ಸಂಸ್ಥಾನಾಧೀಶರು ತಮ್ಮ ಎಲ್ಲ ಅಧಿಕಾರಗಳನ್ನು ಕಾಂಗ್ರೆಸ್ಸಿಗೆ ವಹಿಸಿ ಕೊಡಬೇಕಾದ ಪರಿಸ್ಥಿತಿ ಭಾರತದ ಇತಿಹಾಸದಲ್ಲಿ ಬಹಳ ನಾಜೂಕಾದ ಸಂದರ್ಭ. ಇಂಥ ಸಮಕಾಲೀನ ರಾಜಕೀಯ ಘಟನೆಯನ್ನು ಯಾರಿಗೂ ನೋವಾಗದಂತೆ ರಚಿಸಿರುವುದು ಇಲ್ಲಿನ ವಿಶೇಷ.

	ಇವರ ಎಂಟು ಭಾವಗೀತಾಸಂಕಲನಗಳಲ್ಲಿ ದೊರೆಯುವ ಅನುಭವವೂ ವೈವಿಧ್ಯಪೂರ್ಣವಾದುದು. ನವೋದಯ ಯುಗದಲ್ಲಿ ಸಾಮಾನ್ಯವಾಗಿ ಕಾಣಬರುವ ಪ್ರಕೃತಿ, ಪ್ರೇಮ, ಭಕ್ತಿ, ಆಧ್ಯಾತ್ಮಗಳೇ ಇಲ್ಲಿನ ವಸ್ತುಗಳು. ಅಂದಿನ ರಾಷ್ಟ್ರೀಯ ಎಚ್ಚರವೂ ಇವರ ಕವನಗಳಲ್ಲಿ ಸ್ಥಾನ ಪಡೆದಿವೆ. ಆದರೆ ಅವುಗಳಿಂದ ಪಡೆದ ಅನುಭವದ ನಿರೂಪಣೆಯಲ್ಲಿ ಇವರದೇ ವಿಶಿಷ್ಟತೆ ಇದೆ. ಬಾಹ್ಯ ವಸ್ತುವಿನಿಂದ ಪ್ರೇರಿತರಾಗಿ ಕನಸೊಂದನ್ನು ಕಾಣಬಹುದು. ಅಥವಾ ಸೃಷ್ಟಿಯಲ್ಲಿ ವಿಕೀರ್ಣಗೊಂಡ ಶಿವತತ್ತ್ವವನ್ನು ಅರಿಯಲು ಬಯಸಬಹುದು. ಮೊದಲ ಪ್ರತಿಕ್ರಿಯೆಯಲ್ಲಿ ಇವರ ಭಾವುಕ ಮನಸ್ಸು ಮೋಹಕ ಲೋಕವೊಂದನ್ನು ಸೃಜಿಸುತ್ತದೆ (ಮಳೆಯು ನಾಡ ತೊಯ್ಯುತಿರೆ). ಎರಡನೆಯದರಲ್ಲಿ ಇವರ ಚಿಂತನಶೀಲ ಮನಸ್ಸು ಬಾಹ್ಯಸೃಷ್ಟಿಯಲ್ಲಿ ಹೊಸ ಕಾಣ್ಕೆಯನ್ನು ಕಾಣುತ್ತದೆ (ಚಿಕುಹೂ). ಈ ಮೂರೂ ಪ್ರಕ್ರಿಯೆಗಳು ಹಂತಹಂತವಾಗಿ ಒಂದೇ ಕೃತಿಯಲ್ಲಿ ಕಾಣಬರಬಹುದು (ಗಣೇಶದರ್ಶನ). ಸಂಗೀತಪ್ರಿಯವಾದ ಇವರ ಮನಸ್ಸು ಹಾಡುಗಳನ್ನು ರಚಿಸಿದೆ. ಹಾಗೆಯೇ ಗೀತನಾಟಕಗಳ ಶೈಲಿ ಭಾವಗೀತೆಗಳಲ್ಲೂ ಛಾಯೆದೋರಿ ಎಷ್ಟೋ ಕವನಗಳಲ್ಲಿ ಸಂಭಾಷಣೆಗಳನ್ನು ತಂದಿದೆ. ಶರದೃತುವಿನ ನೀಲ ನಿರಾಳ ಆಕಾಶ, ಇರುಳು, ವರ್ಷದಿನಗಳಲ್ಲಿನ ವಿಶೇಷ ವಾತಾವರಣ ಹಾಗೂ ಮೌನ ಇವು ಇವರು ವಿಶೇಷ ಒಲವು ತೋರಿರುವ ವಸ್ತುಗಳ. ಮೌನದ ಬಗೆಗಿನ ಇವರ ಅನುಭವ ಯದುಗಿರಿಯ ಮೌನ ವಿಕಾಸವೆಂಬುದರಲ್ಲಿ ಸುಂದರವಾಗಿ ಚಿತ್ರಿತವಾಗಿದೆ. ಮುಂಜಾವಿನಲ್ಲಿ ಜನಜೀವನದ ಮೇಲೆ ಹರಡಿರುವ ಸುಂದರ ಮೌನ, ಕಣಿವೆಯ ಪ್ರಕೃತಿಸಿರಿ ತಳೆದಿರುವ ಗಂಭೀರಮೌನ ಹಾಗೆಯೇ ದೇವಸ್ಥಾನದ ಆಸ್ತಿಕ ವಾತಾವರಣದಲ್ಲಿ ಮನದಲ್ಲಿ ಮೂಡುವ ಚಿನ್ಮೌನ-ಇದು ಮೌನದ ವಿಕಾಸ. ಹೀಗೆ ವಿಕಾಸ ಹೊಂದಿದ ಮೌನ ಸಾಮಾನ್ಯ ಮೌನವಲ್ಲ. ಪೂರ್ಣ ರಸಾನುಭವವನ್ನು ಪಡೆದ ಬಳಿಕ ಸಹೃದಯನ ಮನಸ್ಸಿನಲ್ಲಿ ಮೂಡುವ ಶಾಂತ ಮೌನ. ರಸಾನುಭವದ ಬಳಿಕ ಈ ಸ್ಥಿತಿಯನ್ನು ಕವಿಗಳು `ಮಲೆದೇಗುಲ ಎಂದು ಪ್ರತಿಮೀಕರಿಸಿದ್ದಾರೆ. ಲೌಕಿಕ ವಾತಾವರಣದಿಂದ ಹಾರಿ ಕಲೆಯ ಚಾಗರವನ್ನು ಹೊಂದಿ ರಸಸ್ಥಿತಿಯಲ್ಲಿ, ಮೌನ ದೇಗುಲದ ಬಾಗಿಲಿನಲ್ಲಿ ತಾವು ಪಡೆದ ಅನುಭವವನ್ನು ಮಲೆದೇಗುಲದಲ್ಲಿ ವರ್ಣಿಸಿದ್ದಾರೆ. ಮಲೆದೇಗುಲ ಇವರು ಭಾವಗೀತ ಪ್ರಪಂಚದಲ್ಲಿ ಪಡೆದ ಸಿದ್ಧಿಯನ್ನು ಪ್ರತಿನಿಧಿಸುವ ಕೃತಿ.

	ಗದ್ಯ ಪ್ರಾಚುರ್ಯದ ಕಾಲದಲ್ಲಿ ಗೀತಕ್ಕೆ ಒಲಿದು ತಮ್ಮ ಪ್ರತಿಭೆಯನ್ನು ಮೆರೆಸಿರುವ ಇವರು ಗದ್ಯದಲ್ಲಿ ಭಾವನಾ ಚಿತ್ರ, ಸಣ್ಣಕತೆ, ಪ್ರಬಂಧ ಹಾಗೂ ಕಾವ್ಯ ಮೀಮಾಂಸಗಳನ್ನು ಕೊಟ್ಟಿದ್ದಾರೆ. ಇತ್ತೀಚೆಗೆ ಗದ್ಯನಾಟಕವನ್ನೂ ರಚಿಸಿದ್ದಾರೆ.

	ರಾಮಾಚಾರಿಯ ನೆನಪು ಹೆಸರಿಗೆ ತಕ್ಕಂತೆ ನೆನಪುಗಳ ಸಂಕಲನ. ಆದರೆ ಇಲ್ಲಿನ ಚಿತ್ರಣಗಳು ವಿಚಾರ ಲಹರಿಯನ್ನು ಓದುಗರಿಗೆ ತಲಪಿಸುವ ಮುನ್ನ ಒಂದು ಸನ್ನಿವೇಶದ ಪರಿವೇಷವನ್ನು ಧರಿಸುತ್ತವೆ, ಪಾತ್ರಗಳು ಸಂಭಾಷಣೆಗೆ ತೊಡಗುತ್ತವೆ. ಅಂತೆಯೇ ಇಲ್ಲಿನವಕ್ಕೆ ಭಾವನಾಚಿತ್ರಗಳೆಂಬ ಹೆಸರು. ಆದರೆ ರಥಸಪ್ತಮಿಯಲ್ಲಿ ಈ ಪರಿವೇಷ ಹೋಗಿ ಶುದ್ಧ ಚಿತ್ರಗಳು ಮೂಡಿಬರುತ್ತವೆ.

	ಧ್ವಜರಕ್ಷಣೆ ಎಂಟು ಕಥೆಗಳ ಸಂಕಲನ. ವಿಧೇಯನಾಗಿ ಬಾಳುತ್ತಿದ್ದ ಸರ್ಕಾರಿ ನೌಕರ ಒಮ್ಮೆಲೇ ಸನ್ನಿವೇಶ ವಶದಿಂದ ಕಿಡಿಯಂತೆ ಸಿಡಿದು ಹುತಾತ್ಮನಾಗುವುದು ಧ್ವಜರಕ್ಷಣೆಯ ಕಥೆ. ಕೊಳಂದೆಯಂಥ ವಿಚಿತ್ರ ಪಾತ್ರಗಳು, ರಾಗಿಣಿ ಎಂಬ ಕಥೆಯಲ್ಲಿ ಸಂದಿರುವ ಸಾಮಾಜಿಕ ನ್ಯಾಯ, ಪ್ರಧಾನವೆಂಬ ಕಥೆಯಲ್ಲಿ ಬರುವ ದಾನದ ಮನೋಭಾವದ ಹಿನ್ನೆಲೆ-ಎಲ್ಲವೂ ಮನಸೆಳೆಯುವಂಥವು.

	ರಾಮಾಚಾರಿಯ ನೆನಪು, ರಥಸಪ್ತಮಿಗಳಲ್ಲಿನ ಚಿತ್ರಕ ಶೈಲಿ, ವಿಚಾರಶಕ್ತಿ, ಹಾಗೂ ಸಂಸ್ಕøತ ಸಾಹಿತ್ಯ ಶಾಸ್ತ್ರಗಳ ಸಂಸ್ಕಾರದಿಂದ ಬಂದಿರುವ ತಾರ್ಕಿಕ ಶಕ್ತಿ, ತಿಳಿಹಾಸ್ಯ, ಲಘುವಿಡಂಬನೆ ಎಲ್ಲವೂ ಇವರ ಎರಡು ಪ್ರಬಂಧ ಸಂಕಲನಗಳಾದ `ಈಚಲು ಮರದ ಕೆಳಗೆ ಹಾಗೂ `ಧೇನುಕ ಪುರಾಣ'ಗಳಲ್ಲಿ ಎದ್ದು ಕಾಣುವ ಅಂಶಗಳು. ಈ ಎರಡೂ ಪ್ರಬಂಧ ಸಂಕಲನಗಳಲ್ಲಿ ದಿನನಿತ್ಯದ ವಸ್ತುಗಳೂ ಸಾಮಾನ್ಯ ಸಂಗತಿಗಳೂ ಇವರ ಕಣ್ಣುಗಳಲ್ಲಿ, ವಿಚಾರದ ಓಟದಲ್ಲಿ ಪಡೆಯುವ ವಿಶೇಷತೆಗಳನ್ನೇ ಅಲ್ಲದೆ, ವಿವಿಧ ಪ್ರಕ್ರಿಯೆಗಳ ಬಗ್ಗೆ ತಾರ್ಕಿಕವಾಗಿ ವಿಚಾರ ನಡೆಸಿ ವಿಶೇಷ ಸತ್ಯಗಳನ್ನು ಹೊರಗೆಡಹಿರುವುದನ್ನು ನೋಡುತ್ತೇವೆ.

	ಕಾವ್ಯ ಕುತೂಹಲದಲ್ಲಿ ಕಾವ್ಯಮೀಮಾಂಸೆಗೆ ಕೆಲವು ಸ್ವೋಪಜ್ಞ ವಿಚಾರಗಳನ್ನಿವರು ನೀಡಿದ್ದಾರೆ. ಇತ್ತೀಚೆಗೆ ಹರಿಚರಿತಮನನ ಎಂಬ ಮಹಾಕಾವ್ಯವನ್ನೂ ಕಾರಿಕೆ ಎಂಬ ರೂಪಗಳಲ್ಲಿ ರಸಸಮೀಕ್ಷೆ ಎಂಬ ಕಾವ್ಯಮೀಮಾಂಸೆಯನ್ನೂ ಇವರು ರಚಿಸುತ್ತಿದ್ದಾರೆ.

	ಸ್ವಂತ ರಚನೆಗಳೊಂದಿಗೆ ಭಗವದ್ಗೀತೆ, ಗಯಟೆಯ ಫೌಸ್ಟ್ ಹಾಗೂ ತಿರುವಾಯ್ ಮೊಳಿಯ ನೂರು ಪದ್ಯಗಳ ಅನುವಾದಗಳನ್ನೂ ಪದ್ಯಗಳಲ್ಲಿ ಮಾಡಿದ್ದಾರೆ.

	ಕನ್ನಡ ಹಿರಿಯ ಕವಿಗಳಾದ ಇವರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿ ದೊರೆತಿರುವುದೇ ಅಲ್ಲದೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಕೂಡ ಸಂದಿವೆ.			
		(ಎಂ.ಜೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ